ನಾಗದಾ
ಪ್ರಾಚೀನ ದೇವಾಲಯಗಳಿಗಾಗಿ ಪ್ರಸಿದ್ಧವಾಗಿರುವ ಒಂದು ಸ್ಥಳ. ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿದೆ. ಇದು ಹಿಂದೆ ಮೇವಾಡ ಸಂಸ್ಥಾನದ ರಾಜಧಾನಿಯಾಗಿತ್ತು. 1210ರಲ್ಲಿ ದೆಹಲಿಯ ಸುಲ್ತಾನ ಇಲ್ತಮಿಷ್‍ನ ಆಕ್ರಮಣಕ್ಕೊಳಗಾದಾಗ ನಾಗದಾ ಹಾಳಾಯಿತು. ಜನ ನಗರವನ್ನು ಬಿಟ್ಟು ಆಹಾರಿಗೆ ವಲಸೆಹೋದರು. ಆದರೂ ಮುಂದಿನ ಅನೇಕ ವರ್ಷಗಳ ಕಾಲ ನಾಗದಾದಲ್ಲಿ ಹೊಸ ದೇವಾಲಯಗಳ ನಿರ್ಮಾಣ ಆಗುತ್ತಲೇ ಇತ್ತು. ಮೊದಲು ನಾಗದಾದಲ್ಲಿದ್ದ ದೇವಾಲಯಗಳ ಸಂಖ್ಯೆ 1,112 ಎಂದು ಹೇಳಲಾಗಿದೆ. ಈಗಲೂ ಸುತ್ತಣ ಅರಾವಳೀ ಪರ್ವತಶಿಖರಗಳ ಮೇಲೆ ಅಲ್ಲಲ್ಲಿ ಅನೇಕ ದೇವಾಲಯಗಳ ಭಗ್ನಾವಶೇಷಗಳು ಉಳಿದು ಬಂದಿವೆ. ಇಲ್ಲಿಯ ದೇವಸ್ಥಾನಗಳಲ್ಲಿ ಬಹು ಪಾಲಿನವು ಹಿಂದೂ ಆಲಯಗಳು. ಕೆಲವು ಜೈನ ದೇವಾಲಯಗಳೂ ಇವೆ. ಖುಮಾಣರಾವಲ್ ಮತ್ತು ಅದ್ಭುತಜಿಯ ದೇವಾಲಯಗಳು ಮುಖ್ಯ ಜೈನ ಮಂದಿರಗಳು.

    ಎಲ್ಲ ದೇವಾಲಯಗಳೂ ಇಂಡೋ-ಆರ್ಯನ್ ಶೈಲಿಯ ಕಟ್ಟಡಗಳು. ಸಾಮಾನ್ಯ ಇಟ್ಟಿಗೆಯ ಪ್ರಧಾನ ಶಿಖರ ಹಾಗೂ ಇತರ ಸಣ್ಣ ಸಣ್ಣ ಗೋಪುರಗಳಿವೆ. ಸಾಸ್-ಬಹು (ಅತ್ತೆ-ಸೊಸೆ) ದೇವಾಲಯಗಳೆಂದು ಪ್ರಸಿದ್ಧವಾಗಿರುವ ಎರಡು ವಿಷ್ಣು ಮಂದಿರಗಳು 10-11 ಶತಮಾನದ ಕಟ್ಟಡಗಳು. ಈ ದೇವಾಲಯಗಳು ಸುಮಾರು 43 ಮೀ. ಉದ್ದ ಚಚ್ಚೌಕಗಳ ಮೇಲೆ ನಿಂತಿವೆ. ಅತ್ತೆಯ ದೇವಾಲಯದ ಶಿಖರ ಇಟ್ಟಿಗೆಯದು, ಉಳಿದ ಇಡೀ ಕಟ್ಟಡ ಹಾಲು ಬಿಳುಪಿನ ಅಮೃತಶಿಲೆಯದು. ಪ್ರವೇಶದ್ವಾರ ತೋರಣ ಮಾದರಿಯದು. ಇಂದಿಗೂ ಈ ದೇವಾಲಯ ಸದೃಢವಾಗಿ ನಿಂತಿದೆ. ಈ ದೇವಾಲಯದ ಕಂಬಗಳ ಮೇಲಿರುವ ಶಿಲಾಪಟ್ಟಿಕೆಗಳ ಶಿಲ್ಪಗಳೂ ಉತ್ಕøಷ್ಟ ಮಾದರಿಯವು. ದೇವಾಲಯದ ಹೊರಭಿತ್ತಿಯ ಮೇಲೂ ಅನೇಕ ಸುಂದರ ಶಿಲ್ಪಗಳುಂಟು. ಸೂರ್ಯ ಪ್ರಕಾಶದ ಪ್ರವೇಶಕ್ಕಾಗಿ ದೇವಾಲಯದ ಪೂರ್ವ ಹಾಗೂ ದಕ್ಷಿಣ ಭಿತ್ತಿಯಲ್ಲಿ ಅನೇಕ ನಮೂನೆಯ ಜಾಲಂಧ್ರಗಳನ್ನು ಅಳವಡಿಸಲಾಗಿದೆ. ಇಲ್ಲಿರುವ ವಿಶಾಲವಾದ ಸಭಾಮಂಟಪ ಅದ್ಭುತ ವಾಸ್ತು ಸಾಧನೆ. ಮಂಟಪದ ಚಾವಣಿಯಲ್ಲಿರುವ ವಿಕಸಿತ ಕಮಲಪುಷ್ಪ ದಳಗಳ ಮೇಲೆ ಬೇರೆ ಬೇರೆ ಭಂಗಿಯಲ್ಲಿರುವ ನಾಲ್ವರು ನರ್ತಕಿಯರ ಶಿಲ್ಪಗಳಿವೆ. ಕಂಬಗಳ ಮೇಲೂ ಅನೇಕ ಸುಂದರ ಶಿಲ್ಪಗಳಿವೆ. 

	ರಾಸಕ್ರೀಡೆ ಹಾಗೂ ಭಜನೆಯ ಗುಂಪುಗಳು ಶಿಲ್ಪಿತವಾಗಿವೆ. ಇಲ್ಲಿರುವ ಶಿಲ್ಪಗಳು ಸ್ತ್ರೀ ಸೌಂದರ್ಯದ ಅನುಪಮ ಉದಾಹರಣೆಗಳು. ಸೊಸೆ ದೇವಾಲಯದ ಸೌಂದರ್ಯ ಅತ್ತೆ ದೇವಾಲಯಕ್ಕೇನೂ ಕಡಿಮೆ ಇಲ್ಲ. ಇಲ್ಲೂ ಅನೇಕ ಸುಂದರ ಶಿಲ್ಪಗಳಿವೆ. ಈ ದೇವಾಲಯದ ಸಭಾಮಂಟಪದ ಶಿಲ್ಪಗಳಲ್ಲಿ ವಿಷ್ಣು, ಶಿವ, ಗರುಡ ಮುಂತಾದವು ಮುಖ್ಯವಾದವು. ಇದರ ಶಿಖರ ಈಗ ಪೂರ್ತಿ ಬಿದ್ದುಹೋಗಿದೆ. ಅಮೃತಶಿಲೆಯ ಈ ದೇವಾಲಯಗಳ ಸೌಂದರ್ಯ ಅಬೂ ಪರ್ವತದ ದಿಲವಾಡಾ ದೇವಾಲಯಗಳನ್ನು ನೆನಪಿಗೆ ತರುತ್ತದೆ.

    ಅಂದಿನ ಶಿಲ್ಪಕಲಾವೈಭವವನ್ನು ಜಗತ್ತಿಗೆ ಸಾರಲು ಈಗ ನಾಗದಾದಲ್ಲಿ ಸುಮಾರು 52 ದೇವಾಲಯಗಳ ಭಗ್ನಾವಶೇಷಗಳಿವೆ.
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ